ತರ್ಮಾಶೀರೀನ್ 

ಹದಿನಾಲ್ಕನೆಯ ಶತಮಾನದಲ್ಲಿ (ಸು. 1327) ಭಾರತದ ಮೇಲೆ ಆಕ್ರಮಣ ನಡೆಸಿದ ಒಬ್ಬ ಮಂಗೋಲ; ಟ್ರಾನ್ಸ್ ಆಕ್ಸಿಯಾನದ ಚಘಟೈ ನಾಯಕ. ಧರ್ಮಶ್ರೀ ಎಂಬುದೂ ಇವನಿಗಿದ್ದ ಹೆಸರು. ಇವನು ಬೌದ್ಧನಾಗಿದ್ದ. ಅನಂತರ ಇಸ್ಲಾಂ ಮತಕ್ಕೆ ಪರಿವರ್ತನೆ ಹೊಂದಿದ. ಭಾರತವನ್ನು ಜಯಿಸುವ ಉದ್ದೇಶದಿಂದ ಇವನು ದೊಡ್ಡ ಸೈನ್ಯದೊಂದಿಗೆ ಲ್ಯಾಮ್‍ಫೌನ್. ಮುಲ್ತಾನ್ ಮತ್ತು ಇತರ ಪ್ರದೇಶಗಳನ್ನು ಹಾಯ್ದು ದೆಹಲಿಯ ಕಡೆಗೆ ಶೀಘ್ರವಾಗಿ ಮುನ್ನುಗ್ಗಿದನೆಂದೂ ಅಲ್ಲಿಯ ಸುಲ್ತಾನ ಮಹಮದ್ ಬಿನ್ ತುಘಲಕ್ ಇವನನ್ನು ಎದುರಿಸಲಾರದೆ ಅಗಾಧ ಐಶ್ವರ್ಯವನ್ನು ಕೊಟ್ಟು ಅವನು ಹಿಂದಿರುಗುವಂತೆ ಮಾಡಿದನೆಂದೂ ತರ್ಮಾಶೀರೀನ್ ಗುಜರಾತ್ ಮತ್ತು ಸಿಂಧ್ ಪ್ರದೇಶಗಳನ್ನು ಲೂಟಿಮಾಡಿ ಅನೇಕರನ್ನು ಸೆರೆಹಿಡಿದು ಹಿಂದಿರುಗಿದನೆಂದೂ ಫಿರಿಷ್ಟಾ ಎಂಬುವನ ಬರವಣೆಗೆಯಿಂದ ಗೊತ್ತಾಗುತ್ತದೆ. ಮಂಗೋಲರು ದೇಶವನ್ನು ಕೊಳ್ಳೆಹೊಡೆದು ತಾವಾಗಿಯೇ ಹಿಂದಿರುಗಿದರೆಂದೂ ಅದುವರೆಗೂ ತುಘಲಕ್ ತನ್ನ ರಾಜಧಾನಿಯನ್ನು ಬಿಟ್ಟು ಬರಲಿಲ್ಲವೆಂದೂ ಇನ್ನೊಂದು ಮೂಲ (ತಾರೀಖ್—ಇ-ಮುಬಾರಕ್) ತಿಳಿಸುತ್ತದೆ. 							 				(ಎಸ್. ಎನ್. ಜಿ.) 

	ತರ್ಮಾಶೀರೀನ್ ದಂಡೆತ್ತಿ ಬಂದಾಗ ತುಘಲಕ್ ಅವನನ್ನು ಅಟ್ಟಿಸಿಕೊಂಡು ಹೋದನೆಂದೂ ಅವರಿಬ್ಬರ ನಡುವೆ ನೇರ ಕದನ ಸಂಭವಿಸದಿದ್ದರೂ ತರ್ಮಾಶೀರೀನನ ಶಕ್ತಿ ಉಡುಗಿಹೋಯಿತೆಂದೂ ಇನ್ನು ಕೆಲವು ವರದಿಗಳಿಂದ ಗೊತ್ತಾಗುತ್ತದೆ. 

	ಈ ಎರಡು ಬಗೆಯ ವರದಿಗಳ ವಿಚಾರವಾಗಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯ ಉಂಟು. ಒಟ್ಟಿನಲ್ಲಿ ಫರಿಷ್ಟಾನ ವರದಿ ಹೆಚ್ಚು ಸಮ್ಮತವಾಗಿದೆ. ತರ್ಮಾಶೀರೀನನ ಸೈನ್ಯ ದೆಹಲಿಯವರೆಗಿನ ಪ್ರದೇಶವನ್ನು ಕೊಳ್ಳೆ ಹೊಡೆದದ್ದೂ ಅವನನ್ನು ತುಘಲಕ್ ಎದುರಿಸಲಾರದೆ ಹೋದದ್ದೂ ನಿಜವಿರಬಹುದು. ತರ್ಮಾಶೀರೀನ್‍ಗೆ ದೆಹಲಿಗೆಯ ಸುಲ್ತಾನ ಶರಣಾಗತನಾದನೆಂಬುದನ್ನೂ ಅವನಿಗೆ ಲಂಚ ಕೊಟ್ಟು ಅವನು ಹಿಂದಿರುಗುವಂತೆ ಮಾಡಿದನೆಂಬುದನ್ನೂ ಕೆಲವು ವಿದ್ವಾಂಸರು ಒಪ್ಪುವುದಿಲ್ಲ, ತರ್ಮಾಶೀರೀನ್ 1326ರಲ್ಲಿ ಘಜ್ನಿಯ ಬಳಿಯಲ್ಲಿ ಅಮೀರ್ ಚೋಬಾನನಿಗೆ ಸೋತು ಭಾರತಕ್ಕೆ ಓಡಿಬಂದನೆಂಬುದೂ ಇನ್ನೊಂದು ಅಭಿಪ್ರಾಯ, ಅವನು ತನ್ನ ಸೇನೆಯ ಬಹು ಭಾಗದೊಂದಿಗೆ ಪಂಜಾಬಿಗೂ ಅಲ್ಲಿಂದ ದೆಹಲಿಗೂ ಬಂದನೆಂದೂ ದೆಹಲಿಯ ಸುಲ್ತಾನ ಅವನಿಗೆ ನೆರವು ನೀಡುವ ಉದ್ದೇಶದಿಂದ 5,000 ದೀನಾರಗಳನ್ನು ಕೊಟ್ಟನೆಂದೂ ಹೇಳಲಾಗಿದೆ. ಆದರೆ ಈ ಅಭಿಪ್ರಾಯಕ್ಕೆ ಹೆಚ್ಚಿನ ಸಾಕ್ಷ್ಯಾಧಾರಗಳು ಯಾವುವೂ ದೊರಕುವುದಿಲ್ಲ. ಈಗ ದೊರೆತಿರುವ ಮಾಹಿತಿಯೆಲ್ಲ ಬಹಳ ಮಟ್ಟಿಗೆ ಇದಕ್ಕೆ ವಿರುದ್ಧವಾದ್ದಾಗಿದೆ.															*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ